>> • || ಸರ್ವ ಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ‍ ಸಾಧಿಕೆ, ಶರಣ್ಯೇ ತ್ರಯಂಭಿಕೆ ಗೌರಿ ನಾರಾಯಣಿ ನಮೋಸ್ತುತೇ || ಶರಣಾಗತ ದಿನಾರ್ತ ಪರಿತ್ರಾಣ ಪಾರಾಯಣೇ ಸರ್ವಸ್ಯಾರ್ಥಿ ಹರೇ ದೇವಿ ನಾರಾಯಣಿ ನಮೋಸ್ತುತೇ || .
Drop Down Menus CSS Drop Down Menu #

History

ಕ್ಷೇತ್ರ ಮಹಿಮೆ :-

ಶ್ರೀ ಆದಿಪರಾಶಕ್ತಿ ಸ್ವರ್ಣದುರ್ಗಾಪರಮೇಶ್ವರೀ (Swarnadurga)ಅಮ್ಮನವರ ಸಾನ್ನಿಧ್ಯವು ಶಿವನ ಹೃದಯವಾಸಿನಿ ಪರಾಂಬಿಕಾ ಪಾರ್ವತಿಯ ಕಲಿಯುಗದ ಮಾನಸ ಕ್ಷೇತ್ರವಾಗಿದೆ. ಮಹಾದೇವನರಸಿ ತನ್ನ ಮಾಯೆಯಿಂದ ಕೋಟ್ಯಾನುಕೋಟಿ ರೂಪವನ್ನು ಧರಿಸಿ, ಕೋಟ್ಯಾನುಕೋಟಿ ನಾಮದಿಂದ ನೆಲೆಸಿ ಈ ಭುವಿಯನ್ನು ಪರಮಪಾವನಗೊಳಿಸಿದ ಮಾಹಾಮಾತೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ತೆಂಗು-ಕಂಗುಗಳಿಂದ ಕಂಗೊಳಿಸುವ ಕುಂದಗನ್ನಡದ ನೆಲೆವೀಡು. ಕುಂದವರ್ಮನ ಆಳ್ವಿಕೆಗೆ ಒಳಪಟ್ಟ ಐತಿಹಾಸಿಕ ನಾಡು. ಇಂಥಹ ಕುಂದನಾಡಿನ ಹಿರಿಮೆಯ ಪರಶುರಾಮ ಸೃಷ್ಠಿಯ ಮುಕ್ತಿಕ್ಷೇತ್ರ ಧ್ವಜಪುರ ಅಥವಾ ಕೋಟೇಶ್ವರ ತಾಲೂಕು ಕೇಂದ್ರ ಕುಂದಾಪುರದಿಂದ ಸರಿ-ಸುಮಾರು ನಾಲ್ಕು ಕಿಲೋ ಮೀಟರ್ ಅಂತರಲ್ಲಿದೆ. ಇಂಥಹ ಪಾವನ ಧರೆ ಕೋಟೇಶ್ವರದ ಕೋಟಿಲಿಂಗನ ಅಧಿನಕ್ಕೆ ಒಳಪಟ್ಟ ಪುಟ್ಟ ಗ್ರಾಮವೇ ಕುದುರೆಕೆರೆಬೆಟ್ಟು. ಈ ಗ್ರಾಮದ ಅಧಿದೇವತೆಯೇ ಅದ್ವೈತ ಪರಬ್ರಹ್ಮ ಸ್ವರೂಪಿಣಿ ಶ್ರೀಹರಿಯ ಸಹೋದರಿ, ಶಿವಶಕ್ತಿ ಸ್ವರೂಪಿಣಿಯಾದ ಶಕ್ತಿದೇವತೆಯೆ ಶ್ರೀ ಆದಿಪರಾಶಕ್ತಿ ಸ್ವರ್ಣದುರ್ಗಾಪರಮೇಶ್ವರೀ ಅಮ್ಮನವರು.

ಇಲ್ಲಿ ಅಮ್ಮನವರ ಸಾನ್ನಿಧ್ಯ ನಿರ್ಮಾಣವಾಗುವುದರ ಹಿಂದೆ ಕಾರಣೀಭೂತವಾದ ಗತ ವೈಭವಯುತ ಹಿನ್ನಲೆಯಿದೆ. ಎರಡು ಶತಮಾನಗಳ ಹಿಂದೆ ಬ್ರಾಹ್ಮಣರ ಮುಖೇನ ಈ ಸ್ಥಳವನ್ನು ರಾಮಕ್ಷತ್ರಿಯ ಕುಟುಂಬವೊಂದು ವಿಕ್ರಯಿಸಿ ಇಲ್ಲಿ ವಾಸ್ತವ್ಯವನ್ನು ಕಟ್ಟಿಕೊಳ್ಳುತ್ತಾರೆ. ಕಾಲ ಗತಿಸಿದಂತೆ ಕಾಲಗರ್ಭದಲ್ಲಿ ಲೀನವಾದ ದೇವಿಯ ಚೈತನ್ಯವು ಐದನೇ ತಲೆಮಾರು ಸಮೀಪಿಸುತ್ತಿದ್ದಂತೆ ತನ್ನ ಇರುವಿಕೆಯನ್ನು ತೋರ್ಪಡಿಸಲು ಪ್ರಾರಂಭಿಸುತ್ತದೆ.

ಈ ಕುಟುಂಬದಲ್ಲಿ ಓರ್ವ ಬಾಲಕನ ಮೂಲಕ ದೇವಿ ತನ್ನ ಇರುವಿಕೆಯನ್ನು ಗೋಚಾರಕ್ಕೆ ಬರುವಂತೆ ಮಾಡುತ್ತಾಳೆ. ಅಲ್ಲದೇ ಈ ಕುಟುಂಬಕ್ಕೆ ಈ ಸಮಯದಲ್ಲಿ ಹಲವಾರು ದುರಿತ ಬಂದೆರಗಿ, ಆ ದುರಿತವನ್ನು ಕಳೆಯಲು ಕುಟುಂಬ ನಂಬಿದ ಪಾದೇಮಠ ಶ್ರೀ ವೀರೇಶ್ವರ ದೇವಸ್ಥಾನದಲಿನ ಶಕ್ತಿದೇವತೆ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರು ತನ್ನ ಪರಿವಾರದಲ್ಲಿ ಯಕ್ಷಿಣಿ, ವೀರಕಲ್ಕುಡ ಮತ್ತು ಪಂಜುರ್ಲಿ ದೈವಗಳನ್ನು ತನ್ನೊಂದಿಗೆ ಕೂಡಿಕೊಂಡು ಈ ಕುಟುಂಬದ ಗೃಹಭಾಗದೊಳಗೆ ರಕ್ಷಕಿಯಾಗಿ ನೆಲೆ ನಿಲ್ಲುತ್ತಾಳೆ. ಇದರ ತರುವಾಯ ದೇವಿ ತನಗೆ ನವರಾತ್ರಿ ಪೂಜೆಯನ್ನು ನಡೆಸುವಂತೆ ಆಜ್ಞಾಪಿಸುತ್ತಾಳೆ. ದೇವಿಯ ಅಣತಿಯಂತೆ ಮೊದಲ ನವರಾತ್ರಿ ಉತ್ಸವವನ್ನು 2009ರ ದುರ್ಗಾಷ್ಠಮಿಯ ಪುಣ್ಯ ದಿನದಂದು ಕಲಶ ರೂಪದಲ್ಲಿ ಪ್ರತಿಷ್ಠಾಪಿಸಿ ಆಚರಿಸಲಾಯಿತು. ನಂತರದಲ್ಲಿ ಪ್ರತೀ ವರ್ಷ ದುರ್ಗಾಷ್ಠಮಿಯಂದು ಅಮ್ಮನವರಿಗೆ ನವರಾತ್ರಿ ಉತ್ಸವ ಆಚರಿಸುವ ಸಂಪ್ರದಾಯ ನಡೆದುಬಂದಿತು.

ಅಮ್ಮನವರಿಗೆ ದೇಗುಲ ನಿರ್ಮಾಣ ಮಾಡುವ ವಿಚಾರವಾಗಿ ಪ್ರಖ್ಯಾತ ಜ್ಯೋತಿಷ್ಯರಲ್ಲಿ ಪ್ರಶ್ನಾ ಚಿಂತನೆ ನಡೆಸಿದಾಗ ಕೆಲವೊಂದು ನಿಗೂಢ ಸಂಗತಿಗಳು ಬೆಳಕಿಗೆ ಬಂದಿತು. ಅದು ನಾಲ್ಕು ಶತಮಾನಗಳ ಹಿಂದೆ ಇಲ್ಲಿ ಬ್ರಾಹ್ಮಣ ಕುಟುಂಬವೊಂದು ವಾಸ್ತವ್ಯವಿದ್ದು, ಆ ಕುಟುಂಬದಲ್ಲಿ ಓರ್ವ ಸಾದ್ವಿ ಮಹಿಳೆ ಸ್ವರ್ಣಗೌರಿಯನ್ನು ಆರಾಧನೆ ಮಾಡುತ್ತಿದ್ದಳು ಎಂಬುದು. ಆ ಬ್ರಾಹ್ಮಣ ಕುಟುಂಬದಲ್ಲಿ ಸ್ಥಳ ಸಂಬಂಧಿತವಾಗಿ ನಡೆದ ವಾಗ್ವಾದದಿಂದ ರಕ್ತಪಾತ ಸಂಭವಿಸಿ ಕುಟುಂಬ ಪೂರ್ಣ ನಶಿಸಿ, ಸಾದ್ವಿಯಿಂದ ಆರಾಧನೆಗೊಂಡ ದೇವಿ ಸ್ವರ್ಣಗೌರಿಯ ಚೈತನ್ಯ ಕಾಲಗರ್ಭದಲ್ಲಿ ಲೀನವಾಯಿತೆಂಬುದು.

ಮುಂದೆ ಕಾಲ-ಸನ್ನಿಹಿತವಾದಾಗ ಭೂ-ದುರ್ಗೆ ಸ್ವರ್ಣಗೌರಿ ಮತ್ತು ಕುಟುಂಬದ ಆರಾಧ್ಯ ಪಾದೇಮಠದ ತಾಮಸ-ದುರ್ಗೆಯ ಉಭಯ ಚೈತನ್ಯ ಸಮ್ಮಿಳಿತಗೊಂಡು ಅದ್ವೈತಶಕ್ತಿ ಪ್ರಕಟಗೊಳ್ಳುತ್ತದೆ. ಅಮ್ಮನವರು ತನ್ನ ಮೂಲ ಚೈತನ್ಯದಿಂದ ತಾಮಸ ಅಂಶವನ್ನು ಭದ್ರಕಾಳಿ ರೂಪದಲ್ಲಿ ಪ್ರಕಟಿಸಿ ದೇಗುಲದ ಮುಂದೆ ಇರುವ ಸರ್ವತೋಭದ್ರ ಅಥವಾ ಕಹಿಬೇವಿನ ವೃಕ್ಷದಲ್ಲಿ ಸನ್ನಿಹಿತಗೊಳಿಸುತ್ತಾಳೆ. ಈ ಕಾರಣದಿಂದ ಇಲ್ಲಿ ಪ್ರತೀ ತಿಂಗಳ ಅಮಾವಾಸ್ಯೇಯಂದು ನಿಷಾ ಕಾಲದಲ್ಲಿ ಕೂಷ್ಮಾಂಡ ಬಲಿಪೂಜೆ ನಡೆಸುವ ಸಂಪ್ರದಾಯ ನಡೆದು ಬಂತು. ಮೂಲದುರ್ಗೆಯು ಸಾದ್ವಿಯಿಂದ ಸ್ವರ್ಣಗೌರಿ ರೂಪದಲ್ಲಿ ಉಪಾಸನೆಗೊಂಡ ಕಾರಣಕ್ಕೆ, ಸ್ವರ್ಣ ಮೈಕಾಂತಿಯಿಂದ ಕಂಗೊಳಿಸುತ್ತಾ, ಸಾಕ್ಷಾತ್ ರಾಜರಾಜೇಶ್ವರೀ ಸ್ವರೂಪಿಣಿಯಾಗಿ ಸ್ವರ್ಣದುರ್ಗಾಪರಮೇಶ್ವರೀ ಎಂಬ ದಿವ್ಯ ನಾಮದೊಂದಿಗೆ ಮುಂದೆ ಇಲ್ಲಿ ನೆಲೆಯಾಗುತ್ತಾಳೆ. ಅಲ್ಲದೆ ತನ್ನ ಧ್ಯಾನ ಶ್ಲೋಕವನ್ನು ಪ್ರಕಟಪಡಿಸಿ, ಅದರಂತೆ ತನ್ನ ಬಿಂಬ ರಚಿಸುವಂತೆ ಆಜ್ಞಾಪನೆ ನೀಡುತ್ತಾಳೆ.

ಧ್ಯಾನ ಶ್ಲೋಕ :-
ತ್ರಿನಯನಾಂ ಹಿರಣ್ಯ ಸುಂದರೀಂ ಗೌರಿ ಪದ್ಮಾಸನಾಸ್ಥಿತಾಂ |
ಬಾಲಚಂದ್ರಾಕೃತಿ ಸಿಂಧೂರಾಂ ಲಲಿತೇ ಶಂಖ-ಚಕ್ರ-ಮಭಯ-ಶೂಲಾಂಭುಜಾಂ |
ಪಂಚಪಣಿವಿಭೂಷಿತ ಹೇಮ ಮುಕುಟಾಂ ಚಂಡಿಕಾ ವರಸಿಂಹ-ವೃಷಭ ವಾಹನಾಂ |
ಹಯವೇಶಾಂತ ಪುರಾಧೀಶ್ವರೀಂ ವಂದೇ ಪರಾಶಕ್ತಿಃ ನಮಾಮಿ ಸ್ವರ್ಣದುರ್ಗಾಪರಮೇಶ್ವರೀಂ ||

ಶ್ಲೋಕಾರ್ಥ :-
ಮೂರು ಕಣ್ಣುಳ್ಳವಳೂ, ಚಿನ್ನದ ಮೈಕಾಂತಿಯನ್ನು ಹೊಂದಿ ಪದ್ಮಾಸನದಲ್ಲಿ ಕುಳಿತ ಗೌರೀ, ಬಾಲಚಂದ್ರನ ಆಕೃತಿ ಸಿಂಧೂರವನ್ನು ಹಣೆಯಲ್ಲಿ ಧರಿಸಿ ಕರದಲ್ಲಿ ಶಂಖ-ಚಕ್ರ-ಶೂಲವನ್ನು ಧರಿಸಿದ ಅಭಯಹಸ್ತೆ, ಐದುಶಿರದ ನಾಗನನ್ನು ತನ್ನ ಕಿರೀಟದಲ್ಲಿ ಧರಿಸಿದ ಚಂಡಿಕೆ, ಸಿಂಹ, ವ್ಯಾಘ್ರ, ವೃಷಭವನ್ನು ವಾಹನವನ್ನಾಗಿ ಉಳ್ಳವಳೂ, ಹಯವೇಶಾಂತಪುರ ಅಥವಾ ಕುದುರೆಕೆರೆಬೆಟ್ಟಿನಲ್ಲಿ ನೆಲೆಯಾದ ಪರಾಶಕ್ತಿ ರೂಪಿಣಿಯಾದ ಸ್ವರ್ಣದುರ್ಗೆಯನ್ನು ನಾನು ಧ್ಯಾನಿಸುತ್ತೇನೆ ಎಂಬುದು ಧ್ಯಾನಶ್ಲೋಕದ ನಿರೂಪಣೆ. ಈ ಧ್ಯಾನ್ಯಶ್ಲೋಕದ ನಿರೂಪಣೆಯಂತೆ ದೇವಿಯ ಬಿಂಬವನ್ನು ರಚನೆ ಮಾಡಲಾಯಿತು.

ಇಷ್ಟು ಮಾತ್ರವಲ್ಲದೇ ಸ್ವರ್ಣದುರ್ಗೆಯ ಮೂಲಬಿಂಬಕ್ಕೂ ಕೊಲ್ಲೂರು ಮೂಕಾಂಬಿಕೆಯ ಮೂಲಬಿಂಬಕ್ಕೂ ಸಾಮ್ಯತೆಯಿದೆ. ಕೊಲ್ಲೂರು ಮೂಕಾಂಬಿಕೆಯೂ ಕೂಡಾ ಸ್ವರ್ಣಗೌರಿ ಎಂಬುದು ಪುರಾಣ ಸಾರುತ್ತದೆ. ಸಾಮಾನ್ಯವಾಗಿ ದೇವಿಗೆ ಸಿಂಹವಾಹನವಾದರೆ, ಇಲ್ಲಿ ಅಮ್ಮನವರ ವಾಹನ ವೃಷಭ. ಅಂದರೆ ಸ್ವರ್ಣಗೌರಿ ಇಲ್ಲಿ ಮಹಾಗೌರಿ ಸ್ವರೂಪಿಣಿ. ಅಮ್ಮನವರು ಇಲ್ಲಿ ಹರಿ-ಹರರ ಸಮ್ಮಿಳಿತ ಮೂಲರೂಪ. ಅಮ್ಮನವರು ಮುಂಜಾನೆ ಸರಸ್ವತೀ ರೂಪದಲ್ಲೂ, ಮಧ್ಯಾಹ್ನ ಕಾಲದಲ್ಲಿ ಮಹಾಕಾಳಿ ರೂಪದಲ್ಲೂ, ಸಂದ್ಯಾ ಕಾಲದಲ್ಲಿ ಮಹಾಲಕ್ಷ್ಮೀ ರೂಪದಲ್ಲೂ ಸ್ಥಿತಳಾಗಿರುತ್ತಾಳೆ. ಆಯಾಯಾ ಕಾಲದಲ್ಲಿ ಆಯಾಯ ಫಲವನ್ನು ಪ್ರಧಾನಿಸುತ್ತಾಳೆ.

ಪ್ರಶ್ನಾ ಚಿಂತನೆಯಂತೆ 2014ರ ಮನ್ಮಥ ನಾಮ ಸಂವತ್ಸರದ ಮಾಘ ಬಹುಳ ಅಷ್ಟಮಿ ಮತ್ತು ನವಮಿಯಂದು ಕುಟುಂಬಿಕರು ಮತ್ತು ಗ್ರಾಮಸ್ಥರ ನೆರವಿನಿಂದ ಅಮ್ಮನವರ ಭವ್ಯ ದೇಗುಲ ಲೋಕಾರ್ಪಣೆಗೊಂಡಿತು. ಪವಾಡ ಸದೃಶವಾಗಿ ಅಂಬಿಕೆಯ ಮಂದಿರ ನಿರ್ಮಾಣಗೊಂಡು, ಅಷ್ಟಬಂಧ-ಬ್ರಹ್ಮಕಲಶ ವಿಜೃಂಭಣೆಯಿಂದ ನೆರವೇರಿತು. ಭಕ್ತರಲ್ಲಿ ಧನ್ಯತಾಭಾವ ಮೂಡಿತು. ಅಂದಿನಿಂದ ಪ್ರತೀ ವರ್ಷ ಮಾಘ ಬಹುಳ ನವಮಿಯನ್ನು ಅಂಬಿಕೆಯ ಪ್ರತಿಷ್ಠಾ ನವಮಿ ಎಂದು ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಫೆಬ್ರವರಿ-ಅಥವಾ ಮಾರ್ಚ್ ತಿಂಗಳಿನಲ್ಲಿ ವಾರ್ಷಿಕ ಹಬ್ಬವು ನಡೆಯುತ್ತದೆ.

ಅಮ್ಮನವರ ಜೊತೆಯಲ್ಲಿ ಪರಿವಾರ ಶಕ್ತಿಗಳಾದ ಭೂ-ಸಂಬಂಧಿತ ವಾಸುಕೀ ನಾಗರಾಜ ಮತ್ತು ಪಾದೇಮಠದ ಧರ್ಮದೈವಗಳಾದ ಯಕ್ಷಿಣಿ, ವೀರಕಲ್ಕುಡ ಮತ್ತು ಅಣ್ಣಪ್ಪ ಪಂಜುರ್ಲಿಯನ್ನು ಪ್ರತಿಷ್ಠೆ ಮಾಡಲಾಯಿತು. ಕುಟುಂಬ ನಂಬಿರುವ ಪಾದೇಮಠದ ಹೈಗುಳಿ ದೈವಕ್ಕೂ ಕೂಡಾ ಇಲ್ಲಿ ಆರಾಧನೆ ನಡೆಯುತ್ತದೆ.


ಪೂಜಾ ವಿನಿಯೋಗಾದಿಗಳು :-

ಅಮ್ಮನವರ ಸಾನ್ನಿಧ್ಯದಲ್ಲಿ ವಾರ್ಷಿಕ ಉತ್ಸವಾಧಿಗಳು ಚಾಂದ್ರಮಾನ ರಿತ್ಯ ನಡೆಸಲಾಗುತ್ತದೆ. ಚಾಂದ್ರಮಾನ ಯುಗಾದಿಯಿಂದ ಆರಂಭಿಸಿ, ಮುಂದಿನ ಯುಗಾದಿ ಪರ್ಯಂತ ಅನೇಕ ಪೂಜಾ-ಉತ್ಸವಗಳು ಇಲ್ಲಿ ಜರುಗುತ್ತದೆ. ದೇವಿಗೆ ಬೆಳಿಗ್ಗೆ ಮತ್ತು ರಾತ್ರಿ ದ್ವಿಕಾಲ ಪೂಜೆ ಮಾಡಲಾಗುತ್ತದೆ. ಗೃಹಭಾಗದ ಮೂಲದುರ್ಗೆಗೆ ಮಂಗಳಾರತಿ ನಡೆದ ನಂತರವೇ ದೇಗುಲದಲ್ಲಿ ಪೂಜಾದಿಗಳು ನಡೆಯುತ್ತದೆ. ಚಾಂದ್ರಮಾನ ಯುಗಾದಿಯ ನಂತರ ಕೆಲ ದಿನಗಳು ಭಗವಾನ್ ಸೂರ್ಯದೇವ ತನ್ನ ಕಿರಣಗಳಿಂದ ದೇವಿಯ ಚರಣ ಸ್ಪರ್ಷಮಾಡುವ ಮೂಲಕ ತಾನೂ ಕೂಡಾ ಧನ್ಯನಾಗುತ್ತಾನೆ.

ನಂತರ ಬರುವ ಅಕ್ಷಯ ತೃತೀಯ, ನಾಗರ ಪಂಚಮಿ, ವರಮಹಾಲಕ್ಷ್ಮೀ ಪೂಜೆ, ಭಾದ್ರಪದ ಮಾಸದಲ್ಲಿ ಬರುವ ಸ್ವರ್ಣಗೌರಿ, ಗಣೇಶ ಚತುರ್ಥಿ, ಆಶ್ವೀಜ ಮಾಸದಲ್ಲಿ ಬರುವ ಶರನ್ನವರಾತ್ರಿ ಮಹೋತ್ಸವ, ಕದಿರು ಕಟ್ಟುವ ಪೂಜೆ., ಸಿಂಹ ಮಾಸದಲ್ಲಿ ಬರುವ ಸೋಣಾರ್ತಿ ಪೂಜೆ, ಕಾರ್ತಿಕ ಮಾಸದ ದೀಪೋತ್ಸವ, ಇವೆಲ್ಲವೂ ಅಮ್ಮನವರಿಗೆ ವಿಶೇಷ.

ನವರಾತ್ರಿಯಂದು ಅಮ್ಮನವರಿಗೆ ಪ್ರತೀನಿತ್ಯ ಒಂದೊಂದು ಅಲಂಕಾರವನ್ನು ಮಾಡಿ, ಶೃಂಗರಿಸಲಾಗುತ್ತದೆ. ದುರ್ಗಾಷ್ಠಮಿಯಂದು ವಿಶೇಷ ಪೂಜಾದಿಗಳು ನಡೆದು ರಾತ್ರಿ ಮಹಾಪೂಜೆಯ ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯುತ್ತದೆ. ಇಲ್ಲಿ ಆಡಂಬರಕ್ಕೆ ಆಸ್ಪದವಿಲ್ಲ, ಭಕ್ತಿಗೆ ಮಾತ್ರ ಅವಕಾಶ. ದೇವಿಗೆ ಅತ್ಯಂತ ಪ್ರಿಯವಾದ ಮಲ್ಲಿಗೆ, ಕಿಸ್ಕಾರ ಹಾಗೂ ಸಿಂಗಾರ ಪುಷ್ಪವನ್ನು ಸಮರ್ಪಣೆ ಮಾಡಿದರೆ ಅಮ್ಮನವರು ಅತ್ಯಂತ ಸುಪ್ರೀತಳಾಗುತ್ತಾಳೆ ಎಂಬುದು ನಂಬಿಕೆ.

ಕ್ಷೇತ್ರದಲ್ಲಿ ಪ್ರತಿಷ್ಠಾ ನವಮಿಯನ್ನು ಬಿಟ್ಟರೆ ಸಿಂಹ ಮಾಸ ಪರ್ಯಂತ ದಿನಂಪ್ರತಿ ನಡೆಯುವ ಸೋಣಾರ್ತಿ ಪೂಜೆ ಭಕ್ತರನ್ನು ದೇವಿ ಲೋಕಕ್ಕೆ ಕೊಂಡೊಯ್ಯತ್ತದೆ. ಪ್ರತೀದಿನ ಗ್ರಾಮದ ಒಂದೊಂದು ಭಕ್ತರ ಹರಿಕೆ ರೂಪದಲ್ಲಿ ಸೋಣಾರ್ತಿ ನಡೆಯುತ್ತದೆ. ಅಲ್ಲದೆ ಕಾರ್ತಿಕ ಬಹುಳ ಅಷ್ಟಮಿಯಂದು ನಡೆಯುವ ಕಾರ್ತಿಕ ದೀಪೋತ್ಸವ ಅಜ್ಞಾನವನ್ನು ಕಳೆದು ಸುಜ್ಞಾನವನ್ನು ಬೆಳಗುವ ಬೆಳಕಿನ ಹಬ್ಬವೆಂಬಂತೆ ಅನಿಸುತ್ತದೆ. ಅಂದು ಗ್ರಾಮದ ಭಕ್ತರು ಅಮ್ಮನವರಿಗೆ ಹಣತೆ ದೀಪವನ್ನು ಬೆಳಗಿ ಕೃತಾರ್ಥರಾಗುತ್ತದೆ. ಅಂದು ದೀಪೋತ್ಸವ ಹಾಗೂ ಮಹಾರಂಗಪೂಜೆ ನಡೆಯುತ್ತದೆ. ತಂಬಿಟ್ಟು ಅಥವಾ ಅಕ್ಕಿಹಿಟ್ಟಿನ ದೀಪಾರಾಧನೆಯಿಂದ ಜ್ಞಾನವನ್ನು, ಜಂಬೀರ ಅಥವಾ ಲಿಂಬೆಹಣ್ಣಿನ ದೀಪದಿಂದ ಶತ್ರುಬಾದೆ ನಿವಾರಣೆಯನ್ನು, ಇನ್ನು ಘೃತ ಅಥವಾ ತುಪ್ಪದ ದೀಪ ಬೆಳಗುವುದರಿಂದ ಐಶ್ವರ್ಯವನ್ನು ಭಕ್ತರಿಗೆ ಕರುಣಿಸುತ್ತಾಳೆ ಎಂಬುದು ದೇವಿಪುರಾಣದ ಉಲ್ಲೇಖ.

ಅಮ್ಮನವರ ಸಾನ್ನಿಧ್ಯದಲ್ಲಿ ಕುಂಕುಮಾರ್ಚನೆ, ಹರಿವಾಣ ನೈವೇದ್ಯ, ಹಣ್ಣು-ಕಾಯಿ, ಅಲಂಕಾರ ಪೂಜೆ, ಸೀರೆ ಸಮರ್ಪಣೆ, ಸ್ವರ್ಣ-ಸಮರ್ಪಣೆ, ಪಂಚಾಮೃತ ನೈವೇದ್ಯ, ಭದ್ರಕಾಳಿ ಸನ್ನಿಧಿಯಲ್ಲಿ ಪ್ರತೀ ಅಮಾವಾಸ್ಯೆಯಂದು ಬಲಿಪೂಜೆ ಹಾಗೂ ಇನ್ನೂ ಹಲವಾರು ಸೇವೆಗಳು ಜರಗುತ್ತದೆ. ಪ್ರತೀ ಶುಕ್ರವಾರ ದೇವಿಗೆ ಗ್ರಾಮಸ್ಥರಿಂದ ಭಜನೆ ಹಾಗೂ ವಿಶೇಷ ಅಲಂಕಾರ ಪೂಜೆ ಮತ್ತು ಮಹಾನೈವೇದ್ಯ-ಪಾನಕ ನೈವೇದ್ಯ ಸೇವೆ ನಡೆಯುತ್ತದೆ. ಅಲ್ಲದೇ ಪ್ರತೀ ಸಂಕ್ರಾಂತಿಯಂದು ಶ್ರೀಅಮ್ಮನವರ ಸಮೇತ ಪರಿವಾರ ದೈವಗಳಿಗೆ ವಿಶೇಷ ಪೂಜಾ ವಿನಿಯೋಗಾದಿಗಳು ಮತ್ತು ನೈವೇದ್ಯ ಸಮರ್ಪಣೆಯಾಗುತ್ತದೆ.

ಈ ಕ್ಷೇತ್ರ ವ್ಯಾಪ್ತಿಯಲ್ಲಿ ಯಾರೇ ಹೊಸ ಚಿನ್ನದ ಆಭರಣಗಳನ್ನು ಖರೀದಿಸಿದರೆ ಅದನ್ನು ದೇವಿಗೆ ಸಮರ್ಪಿಸಿ ನಂತರ ಧರಿಸುವುದು ಸಂಪ್ರದಾಯ. ಅಲ್ಲದೆ ಹರಕೆ ರೂಪದಲ್ಲಿ ಅಮ್ಮನವರಿಗೆ ನೂರಾರು ಸೀರೆಗಳು ಸಮರ್ಪಣೆಗೊಳ್ಳುತ್ತದೆ. ತಾವು ಸಮರ್ಪಿಸಿದ ಸೀರೆಯಲ್ಲಿ ಅಮ್ಮನವರ ಅಲಂಕಾರ ಪೂಜೆಯನ್ನು ಕಂಡು ಭಕ್ತಾಧಿಗಳ ಧನ್ಯರಾಗುತ್ತಾರೆ. ಇದೊಂದು ಸರ್ವಧರ್ಮಿಯರ ಸಮ್ಮಿಲನದ ಕ್ಷೇತ್ರವೆಂದರೂ ತಪ್ಪಾಗಲಾರದು. ಎಲ್ಲಾ ಮತ-ಪಂಥೀಯರು ಇಲ್ಲಿ ಅಮ್ಮನವರ ಭಕ್ತರು.

ಶ್ರೀ ವಾಸುಕಿ ನಾಗರಾಜನ ಸನ್ನಿಧಾನದಲ್ಲಿ ಪ್ರತೀ ತಿಂಗಳ ಶುದ್ಧ ಪಂಚಮಿಯಂದು ತನುಸೇವೆ ನಡೆಯುತ್ತದೆ. ವಾರ್ಷಿಕ ನಾಗರ ಪಂಚಮಿಯಂದು ಭಕ್ತರಿಂದ ವಿಶೇಷ ಪೂಜಾದಿಗಳು ಜರಗುತ್ತದೆ. ಯಕ್ಷಿಣಿ ಅಮ್ಮನ ಸನ್ನಿಧಾನದಲ್ಲಿ ಕುಂಕುಮಾರ್ಚನೆ, ಅಲಂಕಾರ ಪೂಜೆ, ಹಾಲು-ಹಣ್ಣು ಸಮರ್ಪಣೆ, ಮಂಗಳಾರತಿ ಸೇವೆ ನಡೆಯುತ್ತದೆ. ಪ್ರತೀ ವರ್ಷ ಜ್ಯೇಷ್ಠ ಪೌರ್ಣಮಿಯಂದು ಯಕ್ಷಿಣಿಯ ಜನ್ಮದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಅಂದು ದೇವಿಗೆ ವಿಶೇಷ ಅಲಂಕಾರ ಮಾಡಿ ವಿಶೇಷ ಪೂಜಾದಿಗಳನ್ನು ನಡೆಸಲಾಗುತ್ತದೆ.

ಸಾಮಾನ್ಯವಾಗಿ ಧರ್ಮದೈವಗಳಾದ ವೀರಕಲ್ಕುಡ, ಹಾಗುಳಿ, ಅಣ್ಣಪ್ಪ ಪಂಜುರ್ಲಿ ಸನ್ನಿದಾನದಲ್ಲಿ ಭಸ್ಮಾರ್ಚನೆ, ಮಂಗಳಾರತಿ, ಹೂವಿನಪೂಜೆ, ಸಂಕ್ರಾಂತಿ ಪೂಜೆ ಹಾಗೂ ವಿಶೇಷ ಸಂದರ್ಭದಲ್ಲಿ ವರ್ಷಕ್ಕೆ ಎರಡು ದೈವಭೋಗ ಬಲಿ ನೀಡುವ ಸಂಪ್ರದಾಯವು ಇದೆ. ಕಲ್ಕುಡನಿಗೆ ಕಡುಬು ನೈವೇದ್ಯ, ಅಣ್ಣಪ್ಪ ಪಂಜುರ್ಲಿಗೆ ಕಾಯಿ-ಬೆಲ್ಲ, ಇನ್ನು ಪ್ರತೀ ವರ್ಷ ಆಷಾಡ ಅಮಾವಾಸ್ಯೆಯಂದು ಕಲ್ಕುಡನ ಜನ್ಮ ದಿನವನ್ನಾಗಿಯೂ, ಶ್ರಾವಣ ಶುಕ್ಲ ಪಂಚಮಿಯನ್ನು ಪಂಜುರ್ಲಿಯ ಜನ್ಮದಿನವನ್ನಾಗಿಯೂ ಆಚರಣೆ ಮಾಡಲಾಗುತ್ತದೆ.


ಯಕ್ಷಗಾನ :-

ವಾಸ್ತುತಜ್ಞ ಡಾ| ಬಸವರಾಜ್ ಶೆಟ್ಟಿಗಾರ್ ರವರು ಕ್ಷೇತ್ರಕ್ಕೆ ಸಂಬಂಧಿದಂತೆ ಶ್ರೀ ಸ್ವರ್ಣದುರ್ಗಾ ಮಹಾತ್ಮೆ ಎಂಬ ಯಕ್ಷಗಾನವನ್ನು ರಚಿಸಿ, ಅದನ್ನು ಸೌಕೂರು ಮೇಳದವರಿಂದ ಪ್ರದರ್ಶನಗೊಳ್ಳುವಂತೆ ಶ್ರಮಿಸಿ, ಆ ಪ್ರಸಂಗ ನೂರಾರು ಪ್ರದರ್ಶನವನ್ನು ಕಂಡು ಜನಮನ್ನಣೆ ಕೂಡಾ ಗಳಿಸಿದೆ.